ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಆದಿಮಾನವ ಕಲೆ
	ಮಾನವ ನೆಟ್ಟಗೆ ನಡೆಯುವುದನ್ನು ಮತ್ತು ಕಲ್ಲಿನ ಆಯುಧಗಳನ್ನು ಮಾಡುವುದನ್ನು ಕಲಿತುಕೊಂಡಮೇಲೆ, ಅದರ ಜೊತೆಯಲ್ಲಿಯೇ ಕಲೆಯ ಸೃಷ್ಟಿಯನ್ನೂ ಮಾಡಿದ. ತಾನು ಮಾಡುತ್ತಿರುವುದು ಕಲೆ ಎಂಬ ಸ್ಪಷ್ಟೋದ್ದೇಶ ಅವನಿಗೆ ಇತ್ತೆಂದು ಹೇಳಲಿಕ್ಕೆ ಬಾರದಾದರೂ ತಾನು ಮಾಡಿರುವ ಪ್ರತಿಯೊಂದು ಕೆಲಸದಲ್ಲೂ ಉಪಯೋಗಿಸುತ್ತಿದ್ದ ಪ್ರತಿಯೊಂದು ಪದಾರ್ಥ ಅಥವಾ ಸಾಧನದಲ್ಲೂ ತಾಂತ್ರಿಕ ನೈಪುಣ್ಯ, ನಯ, ನಾಜೂಕುಗಳನ್ನು ತರಲು ಪ್ರಯತ್ನಿಸಿದನೆಂಬುದೇನೋ ನಿಜ. ಅವನ ಹೃದಯಾಂತರಾಳದಲ್ಲಿದ್ದ ಕಲಾಭಿರುಚಿ, ಕಲಾ ಮನೋಧರ್ಮ ಕ್ರಮೇಣ ಅವನ ಜೀವನದೊಂದಿಗೇ ಬೆಳೆದು ಬಂದಿತೆಂದು ಹೇಳಬಹುದು. ಅನೇಕಾನೇಕ ಉತ್ಖನನಗಳಿಂದ ದೊರಕಿರುವ ಅವಶೇಷಗಳಲ್ಲಿ ಅವನ ಕಲೆಯ ವಿವಿಧ ಹಂತಗಳನ್ನು ಕಾಣಬಹುದು. ಪ್ರಾರಂಭದಲ್ಲಿ ಅವನ ಕಲೆ ಉಪಯೋಗ ನಿಷ್ಠವಾಗಿದ್ದಿರಬೇಕು. ಏಕೆಂದರೆ ಜೀವನ ನಿರ್ವಹಣೆಯು ಮಾನವನ ಪ್ರಥಮೋದ್ದೇಶ. ಅದಾದ ಅನಂತರ ಕಲಾತ್ಮಕ ಜೀವನದ ಮಾತು ಬರುತ್ತದೆ. ಆಧುನಿಕ ನಾಗರಿಕತೆಗೆ ದೂರವಾಗಿ ಅಲೆಮಾರಿ ಜೀವನ ನಡೆಸುವ, ಒಂದು ರೀತಿ ಅನಾಗರಿಕ ಎನಿಸಿರುವ, ಆದಿಮವರ್ಗದ (ಪ್ರಿಮಿಟಿವ್) ಜನಾಂಗಗಳ ಕಲೆಯನ್ನು ಪ್ರತ್ಯೇಕವಾಗಿ ವಿವೇಚಿಸಲಾಗಿದೆ. (ನೋಡಿ- ಆದಿಮಜನರ-ಕಲೆ)

	ಆದಿಮಾನವನ ಕಲೆಯನ್ನು ಇತಿಹಾಸಪೂರ್ವ ಕಲೆ, ಪ್ರಾಗೈತಿಹಾಸಿಕ ಕಲೆ ಎಂದೂ ಕರೆಯುವುದುಂಟು. ಇದನ್ನು ಬೇಟೆಗಾರರ ಕಲೆ, ಆಹಾರೋತ್ಪಾದಕರ ಕಲೆ, ಲೋಹಗಾರರ ಕಲೆ ಎಂದು ಮೂರು ವಿಭಾಗಗಳಾಗಿ ವಿಂಗಡಿಸಬಹುದು. ಮೊಟ್ಟಮೊದಲು ಮಾನವ ಮುಖ್ಯವಾಗಿ ಬೇಟೆಗಾರನಾಗಿದ್ದುದರಿಂದ ಅವನ ಕಲೆಯಲ್ಲಿ ಬೇಟೆಯ ಚಿತ್ರಗಳನ್ನು ವಿಶೇಷವಾಗಿ ಕಾಣಬಹುದು. ಈ ಚಿತ್ರಗಳು ಸಾಮಾನ್ಯವಾಗಿ ಹಳೆಯ ಶಿಲಾಯುಗದ ಅಂತ್ಯಭಾಗದಲ್ಲಿ ನಿರ್ಮಿತವಾದುವು. ಹಳೆಯ ಶಿಲಾಯುಗದ ಈ ಕಲೆಯಲ್ಲಿ ರೇಖಾಚಿತ್ರ, ವರ್ಣಚಿತ್ರ ಮತ್ತು ಶಿಲ್ಪಗಳನ್ನು ನೋಡಬಹುದು. ಯೂರೋಪಿನ ಅತ್ಯಂತ ಪ್ರಾಚೀನ ಹಳೆಯ ಶಿಲಾಯುಗದ ಚಾಟಲ್ ಪೆರೋನಿಯನ್ ಕಾಲಕ್ಕೆ ಸೇರಿದ್ದುದು. ಅನಂತರದ ಆರಿಗ್ನೇಷಿಯನ್, ಗ್ರಾವೆಟ್ಟಿಯನ್ ಸಂಸ್ಕøತಿಯ ಕಾಲದಲ್ಲಿ ಇದು ಬಳಕೆಯಲ್ಲಿದ್ದು ಮ್ಯಾಗ್ಡಲೀನಿಯನ್ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯನ್ನು ಮುಟ್ಟಿತು. ಆಫ್ರಿಕದಲ್ಲಿ ಹಳೆಯ ಶಿಲಾಯುಗದ ಕೊನೆಯ ಭಾಗದಲ್ಲಿ ಮತ್ತು ಮಧ್ಯಶಿಲಾಯುಗದ ಆದಿ ಭಾಗದಲ್ಲಿ ಕಲೆ ನಿರ್ಮಾಣವಾಯಿತು. ಹಳೆಯ ಶಿಲಾಯುಗದ ಮಾನವ ಉಪಯೋಗಿಸುತ್ತಿದ್ದ ಅನೇಕ ಆಯುಧಗಳಲ್ಲಿ ಕೊರೆಯುಳಿ (ಬ್ಯೂರಿನ್) ರೇಖಾಚಿತ್ರ ನಿರ್ಮಾಣಕ್ಕೆ ಬಹು ಸಹಾಯಕವಾಗಿದ್ದಿತು. ಈ ರೇಖಾಚಿತ್ರಗಳು ಗುಹೆಗಳ ಗೋಡೆಗಳು, ಸಣ್ಣ ಶಿಲ್ಪಫಲಕಗಳು, ಮೂಳೆಯ ಆಯುಧಗಳ ಮೇಲೆ ರೂಪುಗೊಂಡಿವೆ. ಮ್ಯಾಗ್ಡಲೀನಿಯನ್ ಕಾಲದ ಮೂಳೆಯ ಆಯುಧಗಳು ಬಹು ಸುಂದರ ರೇಖಾಚಿತ್ರಗಳನ್ನು ಒಳಗೊಂಡಿವೆ. ವರ್ಣಚಿತ್ರಗಳನ್ನು ರಚಿಸಲು ಹಳೆಯ ಶಿಲಾಯುಗದ ಮಾನವ ವಿವಿಧ ಬಣ್ಣಗಳ ಕಲ್ಲುಗಳನ್ನು ದ್ರವದ ಸಹಾಯವಿಲ್ಲದೆ ಬಳಸುತ್ತಿದ್ದ. ಮತ್ತೆ ಕೆಲವು ಬಣ್ಣಗಳನ್ನು ಕೆಲವು ಎಲೆಗಳ ರಸದೊಂದಿಗೆ ಮಿಶ್ರಣ ಮಾಡಿ, ಆ ಮಿಶ್ರಣವನ್ನು ಟೊಳ್ಳಾಗಿರುವ ಮೂಳೆಯೊಳಗೆ ಸೇರಿಸಿ ಈಗಿನ ಲೇಖನಿಯಂತೆ ಉಪಯೋಗಿಸುತ್ತಿದ್ದ. ಈ ರೀತಿಯ ವರ್ಣಚಿತ್ರಗಳು ಮಾರ್‍ಸಾಲಾಸ್, ಅಲ್ತಾಮೀರ, ನ್ಯೌಕ್ಸ್, ಲಾಸ್ಕಾಕ್ಸ್ ಮುಂತಾದ ಕಡೆಗಳಲ್ಲಿ ದೊರಕಿವೆ. ಇವುಗಳಲ್ಲಿ ವಿಶೇಷವಾಗಿ ಬೇಟೆಯ ದೃಶ್ಯ ಇಲ್ಲವೇ ವಿವಿಧಪ್ರಾಣಿಗಳ ಚಿತ್ರಗಳು ಮಾತ್ರ ಇವೆ. ಈ ಕಾಲದ ಇನ್ನೊಂದು ರೀತಿಯ ವರ್ಣಚಿತ್ರವೆಂದರೆ ಬಣ್ಣವನ್ನು ಎರಚಿ ಮಾಡುವ ಚಿತ್ರಗಳು (ಸ್ಪ್ರೇ ಪೇಂಟಿಂಗ್). ತನ್ನ ಅಂಗೈಯನ್ನು ಗೋಡೆಯ ಮೇಲಿಟ್ಟು, ತನ್ನ ಬಾಯಲ್ಲಿ ಬಣ್ಣದ ದ್ರವವನ್ನು ಇಟ್ಟುಕೊಂಡು, ಅದನ್ನು ಅಂಗೈಮೇಲೆ ಪಿಚಕಾರಿಯಂತೆ ಉಗುಳಿದಾಗ, ಅಂಗೈಯಿದ್ದ ಭಾಗ ಬಿಟ್ಟು ಮಿಕ್ಕ ಭಾಗವೆಲ್ಲವೂ ಬಣ್ಣವಾಗುತ್ತದೆ. ಅಂಗೈ ಹೊರಗೆ ತೆಗೆದಾಗ ಆ ಚಿತ್ರ ಬಣ್ಣದ ಹಿಂಬದಿಯಲ್ಲಿ ಬೆಳ್ಳಗೆ ಕಾಣುತ್ತದೆ. ಈ ಕಾಲದ ಶಿಲ್ಪಗಳಲ್ಲಿ ಪೂರ್ಣಶಿಲ್ಪ ಮತ್ತು ಉಬ್ಬುಶಿಲ್ಪಗಳನ್ನು ಕಾಣಬಹುದು. ಈ ಶಿಲ್ಪಗಳಲ್ಲಿಯೂ ಮೊದಮೊದಲು ನಿರ್ಮಾಣವಾದುವು ಪ್ರಾಣಿಗಳು. ಆದರೆ ವಿಶೇಷವಾಗಿ ನಾವು ಕಾಣುವುದು ಕಾಮದೇವತೆಯ ಶಿಲ್ಪಗಳು. ಈ ಶಿಲ್ಪಗಳಲ್ಲಿ ಅಂಗಗಳು ಬಹು ಚೆನ್ನಾಗಿ ರೂಪಿತವಾಗಿರುತ್ತವೆ. ಇಂಥ ಶಿಲ್ಪಗಳು ಲೆಸ್ಪುಗ್, ವಿಲೆನ್‍ಡಾರ್ಫ್, ಮೊರಾವಿಯ ಮುಂತಾದ ಕಡೆಗಳಲ್ಲಿ ದೊರಕಿವೆ. ಲೌಸೆಲ್‍ನಲ್ಲಿ ದೊರಕಿರುವ ಉಬ್ಬುಶಿಲ್ಪದ ವಿಗ್ರಹ ಸುಣ್ಣಕಲ್ಲಿನದಾದರೂ ಅಂಗವಿನ್ಯಾಸ ಸ್ಪಷ್ಟವಾಗಿ ರೂಪುಗೊಂಡಿದೆ. 

	ಹಳೆಯ ಶಿಲಾಯುಗದ ಚಿತ್ರಗಳು, ಶಿಲ್ಪಗಳು ಸಾಮಾನ್ಯವಾಗಿ ದುರ್ಗಮವಾದ, ಒಳಗೆ ಬೆಳಕು ಇಲ್ಲದ ಗುಹೆಗಳಲ್ಲಿ ದೊರಕುತ್ತವೆ. ಬೆಳಕಿಲ್ಲದ ಗುಹೆಗಳಲ್ಲಿ ಈ ಚಿತ್ರಗಳನ್ನು ನಿರ್ಮಿಸಿದ ಬಗೆ ಏನು ಎಂಬುದು ವಿವಾದಾಸ್ಪದ ವಿಚಾರ. ಆದರೆ ಇದು ಮೋಡಿ ಅಥವಾ ಮಾಟದ ಕುರುಹು ಎಂದು ಎಲ್ಲರೂ ಒಪ್ಪುತ್ತಾರೆ. ಯಾರ ಕಣ್ಣಿಗೂ ಬೀಳದ ಕಡೆ ಪ್ರಾಣಿಯ ಚಿತ್ರ ಬರೆದರೆ ಆ ಪ್ರಾಣಿ ಬರೆದವನ ಬಿಲ್ಲಿಗೇ ಬಲಿಯಾಗುತ್ತದೆ ಎಂಬ ನಂಬಿಕೆಯಿಂದ ಅವರು ಹಾಗೆ ಮಾಡಿರಬಹುದು. ಆದ್ದರಿಂದ ಚಿತ್ರಗಳನ್ನು ಬರೆದ ಗುಹೆಗಳಲ್ಲಿ ಒಂದರಮೇಲೆ ಒಂದರಂತೆ ಚಿತ್ರಗಳಿವೆ. ಪಕ್ಕದಲ್ಲಿ ಸ್ಥಳ ಖಾಲಿಯಿದ್ದರೂ ಅದನ್ನು ಉಪಯೋಗಿಸದೆ ಅದೇ ಜಾಗವನ್ನು ಉಪಯೋಗಿಸಿರುವುದೂ ಈ ದೃಷ್ಟಿಯಿಂದ ಗಮನಾರ್ಹವಾದುದು. 

	ಆದಿಮಾನವ ಹೊಸಶಿಲಾಯುಗದ ನಾಗರಿಕತೆಯನ್ನು ಸಾಧಿಸಿದಮೇಲೆ ಅವನ ಸಾಧನಸಂಪತ್ತು, ಸುತ್ತಮುತ್ತಲ ವಾತಾವರಣ ಮುಂತಾದುವು ಬದಲಾದುವು. ಅವನು ಆಹಾರೋತ್ಪಾದಕನಾದ. ಒಂದು ಕಡೆ ನಿಲ್ಲುವ ಹವ್ಯಾಸವನ್ನು ರೂಢಿಸಿಕೊಂಡ. ಇದರಿಂದ ಅವನ ಕಲೆಗಳಲ್ಲಿ ಗಮನಾರ್ಹ ಬದಲಾವಣೆಗಳಾದುವು. ಈಗ ಗಮನವೆಲ್ಲವೂ ಹೊಸದಾಗಿ ತಾನು ಕಂಡುಹಿಡಿದಿದ್ದ ಮಡಕೆಗಳನ್ನು ಮಾಡುವುದರಲ್ಲಿ ಅವುಗಳನ್ನು ಅಲಂಕರಿಸುವುದರಲ್ಲಿ ಕೇಂದ್ರಿಕೃತವಾಯಿತು. ಯೂರೋಪಿನ ವಿವಿಧ ಭಾಗಗಳಲ್ಲಿ ದೊರಕಿರುವ ಹೊಸಶಿಲಾಯುಗದ ಮಡಕೆಗಳು ಬಹು ಕಲಾತ್ಮಕವಾಗಿವೆ. ಮಡಕೆಯ ಮೇಲ್ಭಾಗದಲ್ಲಿ ವಿವಿಧಬಣ್ಣಗಳಿಂದ ಬರೆದ ಜ್ಯಾಮಿತಿಕ ಚಿಹ್ನೆಗಳು, ಇಲ್ಲವೇ ಪ್ರಾಣಿಗಳ ಚಿತ್ರಗಳು ವಿಶೇಷವಾಗಿವೆ. ಮಡಕೆಯ ಮೇಲ್ಭಾಗದಲ್ಲಿ ಉಗುರಿನಿಂದ ಅನೇಕ ಅಲಂಕಾರಿಕ ವಿನ್ಯಾಸಗಳನ್ನು ಮಾಡುವುದು, ಇಲ್ಲವೇ ಮೊನಚಾದ ಆಯುಧದಿಂದ ಬುಟ್ಟಿಯ ಹೆಣಿಗೆಯಂತ ಅಲಂಕಾರ ಮಾಡುವುದು ಈ ಕಾಲದ ಮಡಕೆಯಲ್ಲಿ ವಿಶೇಷವಾಗಿ ಕಾಣಬರುತ್ತವೆ. ಈ ಕಾಲದ ಶಿಲ್ಪಗಳೂ ಮಣ್ಣಿನಿಂದಲೇ ಮಾಡಿದವು. ಸೆರ್ನವೋಡದಲ್ಲಿ ದೊರಕಿರುವ ಪುರುಷನ ಮತ್ತು ಸ್ತ್ರೀಯ ಎರಡು ಶಿಲ್ಪಗಳು ಗಮನಾರ್ಹವಾದುವು. ಕುಳಿತಿರುವ ಭಂಗಿಯಲ್ಲಿರುವ ಈ ಶಿಲ್ಪಗಳಲ್ಲಿ ಕಣ್ಣು, ಮೂಗು, ಬಾಯಿ, ಬೆರಳುಗಳು ಕಾಣುವಂತೆ ಕೆತ್ತಲ್ಪಟ್ಟಿವೆ. ಕೇವಲ ಮನುಷ್ಯನ ಆಕಾರವನ್ನು ಕೊಡುವುದೇ ಅಲ್ಲದೆ ವಿವಿಧ ಅಂಗಗಳ ಸೃಷ್ಟೀಕರಣವನ್ನು ತೋರಿಸುವುದರಲ್ಲಿ ನವ ಶಿಲಾಯುಗದ ಈ ಕಲೆಗಾರ ಸಮರ್ಥನಾಗಿದ್ದಾನೆ. ಇದೇ ರೀತಿಯ ಶಿಲ್ಪಗಳು ಮೊರೇವಿಯ, ಹಂಗೆರಿ, ಸಾರ್ಡೀನಿಯ ಮುಂತಾದ ಕಡೆಗಳಲ್ಲಿ ದೊರಕಿವೆ. 

	ಶಿಲಾಯುಗದ ಮಾನವ ಒಂದು ದೊಡ್ಡ ಹೆಜ್ಜೆ ಮುಂದಿಟ್ಟು ಕಂಚಿನ ಯುಗದ ಮಾನವನೆನಿಸಿಕೊಂಡಮೇಲೆ, ಅವನ ಕಲೆಯಲ್ಲಿ ಮಹತ್ತರವಾದ ಬದಲಾವಣೆಗಳು ಉಂಟಾದುವು. ತಾಮ್ರ, ಕಂಚು, ಚಿನ್ನ ಮುಂತಾದ ಲೋಹಗಳ ಕೆಲಸದಲ್ಲಿ ಪರಿಶ್ರಮ ಸಾಧಿಸಿದಂತೆ ಅವನ ಕಲೆ ಅಭಿವೃದ್ಧಿ ಹೊಂದಿತು. ತಾಮ್ರದ ಪಾತ್ರೆಗಳನ್ನು ವಿವಿಧ ಆಕಾರಗಳಲ್ಲಿ ತಯಾರಿಸುವುದೇ ಅಲ್ಲದೆ, ಹಲವಾರು ರೀತಿಯ ಅಲಂಕಾರಿಕ ವಿನ್ಯಾಸಗಳನ್ನು ಅಳವಡಿಸತೊಡಗಿದ. ಈ ಕಾಲದ ಕಂಚಿನ ಪಾತ್ರೆಗಳು ನಿಜವಾಗಿಯೂ ಸುಂದರ ವಸ್ತುಗಳಾಗಿವೆ. ಇವನ ಕಲೆ ಪಾತ್ರೆಗಳಿಗೆ ಮಾತ್ರ ಸೀಮಿತಗೊಳ್ಳದೆ ಪ್ರಾಣಿಗಳ ಲೋಹಶಿಲ್ಪಗಳವರೆಗೂ ವ್ಯಾಪಿಸಿದೆ. 

	ಭಾರತದಲ್ಲಿ ಆದಿಮಾನವ ಕಲೆಯ ಅವಶೇಷಗಳು ಅಷ್ಟಾಗಿ ದೊರಕಿಲ್ಲ. ಮಧ್ಯ ಭಾರತದ ಮಿರ್ಜಾಪುರ, ಮಾಣಿಕ್‍ಪುರ, ರಾಯ್‍ಘರ್ ಜಿಲ್ಲೆಯ ಸಿಂಘನ್‍ಪುರ, ಹೊಶಂಗಾಬಾದ್ ಮುಂತಾದ ಸ್ಥಳಗಳಲ್ಲಿ ಗುಹೆಯ ಕಲ್ಲಿನಮೇಲೆ ಚಿತ್ರಗಳು ದೊರಕಿವೆ. ಇವು ಇತಿಹಾಸದ ಪೂರ್ವಕಾಲದ ಆದಿಮಾನವನಿಂದ ರಚಿತವಾದುವೆಂದು ಕೆಲವರು ಅಭಿಪ್ರಾಯಪಟ್ಟರೂ ಈ ವಿಚಾರದಲ್ಲಿ ಒಮ್ಮತವಿರಲಿಲ್ಲ. ಇವುಗಳಲ್ಲಿ ಮನುಷ್ಯ, ಕುದುರೆ, ಮೊಸಳೆ, ಜಿಂಕೆ ಮುಂತಾದವುಗಳ ಚಿತ್ರಣವಿದೆ. 

	ಆದರೆ ಭಾರತದಲ್ಲಿ ಇತಿಹಾಸ ಪ್ರಾರಂಭಕಾಲದವನೆಂದು ಕರೆಯಬಹುದಾದ ಸಿಂಧೂ ಸಂಸ್ಕøತಿಯ ಮಾನವ ಉತ್ತಮ ಕಲೆಗಾರನಾಗಿದ್ದನೆಂದು ಪ್ರಸಿದ್ಧವಾಗಿಯೇ ಇದೆ. ಇಂಥ ಉತ್ತಮ ಕಲೆ ಬೆಳೆಯಲು ಅದಕ್ಕೆ ಹಿಂದಿನಿಂದಲೂ ಒಂದು ಪರಂಪರೆ ಇದ್ದಿರಬೇಕೆಂದೂ ಆ ಪರಂಪರೆಯ ಕಲಾವಶೇಷಗಳು ನಮಗೆ ಉಪಲಬ್ಧವಾಗಿಲ್ಲವೆಂದೂ ಹೇಳಬಹುದು.           
(ಎ.ವಿ.ಎನ್.)